ಡಾ. ಬಾಳಣ್ಣ ಶೀಗೀಹಳ್ಳಿ
ಡಾ. ಬಾಳಣ್ಣ ಶೀಗಿಹಳ್ಳಿ ಅವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಶ್ರೇಷ್ಠ ಪ್ರಾಧ್ಯಾಪಕರಾಗಿರುವ ಅವರು ಉತ್ತಮ ಗುಣಮಟ್ಟದ ಸಾಹಿತ್ಯ ಸೇವೇಯನ್ನೂ ಮಾಡುತ್ತ ಬಂದಿದ್ದಾರೆ. ಸದ್ದುಗದ್ದಲವಿಲ್ಲದ, ಪ್ರಚಾರದ ಆಡಂಬರವಿಲ್ಲದ ಬದುಕು ಮತ್ತು ಬರಹ ಬಾಳಣ್ಣ ಅವರದು. ಧಾರವಾಡದ ಹಿರಿಯ ಸಾಹಿತಿಗಳ ವಲಯದಲ್ಲಿ ಬಾಳಣ್ಣ ಎಲ್ಲರಿಗೂ ಬೇಕಾಗಿರುವ ಬೆಲ್ಲದಚ್ಚು. ಇಲ್ಲಿ ನಡೆಯುವ ಸಾಹಿತ್ತಿಕ, ಸಾಂಸ್ಕೃತಿಕ ಮತ್ತು ರಂಗ ಚಟುವಟಿಕೆಗಳಲ್ಲಿ ಅವರು ಯಾವಾಗಲೂ ಕ್ರಿಯಾಶೀಲರಾಗಿರುತ್ತಾರೆ. ನಿಗರ್ವ, ವಿನಯವಂತಿಕೆ, ಗಂಭೀರತೆ ಮತ್ತು ಕೊಂಚ ಸಂಕೋಚ ಇವು ಡಾ. ಬಾಳಣ್ಣ ಅವರಲ್ಲಿ ಕಂಡಿರುವ ವಿಶೇಷ ಗುಣಗಳು. ನನ್ನ ಪ್ರಕಾರ ಇವು ಉತ್ತಮ ಸಾಹಿತಿಯ ಲಕ್ಷಣಗಳೂ ಹೌದು. "ಪ್ರತಿಭಾನಂ ಕಾವ್ಯವಿದ್ಯಾ ಪ್ರಚಯ ಪರಿಚಯಂ ವೃದ್ಧ ಸೇವಾನುರಾಗಂ ಸತತಾಭ್ಯಾಸ ಪ್ರಯತ್ನಂ ಕವಿತೆಗೆ ನಿಯತಂ ಕಾರಣಂ" ಎಂದಿದ್ದಾನೆ ನಾಗವರ್ಮ. ಡಾ. ಬಾಳಣ್ಣ ಶೀಗೀಹಳ್ಳಿ ಅವರಲ್ಲಿ ಈ ಎಲ್ಲಾ ಗುಣಗಳಿವೆ.
ಶ್ರೀಯುತರು, ಡೆಪ್ಯುಟಿ ಚೆನ್ನಬಸವಪ್ಪನವರು: ಜೀವನ ಮತ್ತು ಸಾಧನೆ, ಕೃತಿ ಸಂಗಾತಿ, ಪರಿಭಾವ, ಕನ್ನಡ ರಂಗಚಿಂತನೆ, ಚಿಂತಕರು-ಚಿಂತನೆಗಳು, ಬಸವಣ್ಣ ಮತ್ತು ಮಹಾವೀರ, ಹೊನ್ನ ತೂಗುವ ತ್ರಾಸು ಮೊದಲಾದ ಸ್ವತಂತ್ರ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ಬೆಳಗಾವಿ ಜಿಲ್ಲೆಯ ವೀರಶೈವ ದೇಶಗತಿಗಳು, ರನ್ನನ ಸಾಹಸಭೀಮ ವಿಜಯ: ಪರಾಮರ್ಶೆ, ಸ್ಥಾವರವಲ್ಲದ ಬದುಕು, ಹಾಡ ತುರಾಡಾವ, ಆತ್ಮ ಆವ ಕುಲ, ಭರತ ಚಕ್ರೀಯ ದರ್ಶನಲೋಕ, ಡಾ. ಜಿನದತ್ತ ದೇಸಾಯಿ ಕಾವ್ಯ ಸಂವೇದನೆ, ಬಸವರಾಜ ಕಟ್ಟೀಮನಿ ವಾಚಿಕೆ ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ. ಹಲವಾರು ಕೃತಿಗಳಿಗೆ ಸಹಸಂಪಾದಕರಾಗಿಯೂ ಕಾರ್ಯ ಮಾಡಿದ್ದಾರೆ. ಇವರ "ಕೃತಿ ಸಂಗಾತಿ" ಕೃತಿಗೆ - ಡಾ. ಎಸ್. ಎಸ್. ಕೋತಿನ ವಿಮರ್ಶಾ ಪ್ರಶಸ್ತಿ, "ಕನ್ನಡ ರಂಗಚಿಂತನೆಗಳು" ಕೃತಿಗೆ ೨೦೧೧-೧೨ ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಶ್ರೀ ಪ್ರಭುದೇವ ಸಂಸ್ಥಾನ ವಿರಕ್ತಮಠದ ಬಸವ ಬೆಳಗು ಪ್ರಶಸ್ತಿ, ದಕ್ಷಿಣ ಭಾರತ ಜೈನಸಭಾದ ಆಚಾರ್ಯ ಬಾಹುಬಲಿ ಕನ್ನಡ ಸಾಹಿತ್ಯ ಪ್ರಶಸ್ತಿ, ಶ್ರೀ ಗುರು ಪುಟ್ಟರಾಜ ಸಾಹಿತ್ಯ ರತ್ನ ಪ್ರಶಸ್ತಿಗಳು ಲಭಿಸಿವೆ.